ಬೆಸ್ಟ್, ಚಾಲ್ರ್ಸ್ ಹರ್ಬರ್ಟ್ 
1899. ಕೆನಡಾದ ದೇಹಕ್ರಿಯಾ ವಿಜ್ಞಾನಿ. ಜನನ 27-2-1899, ಪಶ್ಚಿಮ ಪೆಂಬ್ರೋಕಿನಲ್ಲಿ (ವೇಲ್ಸ್). ಉನ್ನತ ವಿದ್ಯಾಭ್ಯಾಸವನ್ನು ಕೆನಡಾದಲ್ಲಿ ಮುಗಿಸಿ ಒಂದನೆಯ ಮಹಾಯುದ್ಧದಲ್ಲಿ ಆ ದೇಶದ ಸೈನ್ಯ ಸೇರಿ ಅಲ್ಲಿಯ ಪೌರತ್ವ ಪಡೆದ. ಅನೇಕ ಬಾರಿ ಸಮುದ್ರಯಾನಗಳಾದ ಬಳಿಕ ವ್ಯಾಸಂಗವನ್ನು ಮುಂದುವರಿಸಲು ಟೊರೊಂಟೋ ವಿಶ್ವವಿದ್ಯಾಲಯಕ್ಕೆ ದಾಖಲಾದ. ಇನ್ನೂ ಪದವಿ ಗಳಿಸುವ ಮೊದಲೇ (1921) ತನ್ನ ಪ್ರಯೋಗಶಾಲೆಯ ಸಹೋದ್ಯೋಗಿಯಾಗಿ ಬ್ಯಾಂಟಿಂಗ್ ಜೊತೆ ಸೇರಿದ. ಆ ವೇಳೆಗೆ ಬ್ಯಾಂಟಿಂಗ್ ಇನ್ಸ್ಯುಲಿನ್ ಮತ್ತು ಮಧುಮೇಹದ ಚಿಕಿತ್ಸೆಯಲ್ಲಿ ಇನ್ಸ್ಯುಲಿನ್ ಪಾತ್ರದ ವಿಚಾರವಾಗಿ ಪ್ರಯೋಗ ನಡೆಸುತ್ತಿದ್ದ. ಇವರ ಸಹಯೋಗ ಆರಂಭವಾದ ಕೆಲವೇ ತಿಂಗಳುಗಳಲ್ಲಿ ನಾಯಿಯ ಮೇಲೆ ಪ್ರಯೋಗ ನಡೆಸಿ, ಶಸ್ತ್ರಕ್ರಿಯೆಯಿಂದ ಅದರ ಮೇದೋಜೀರಕ ಗ್ರಂಥಿಯನ್ನು ತೆಗೆದುಹಾಕಿ ಕೃತಕವಾಗಿ ಮಧುಮೇಹ ಬರಿಸಲಾದ ನಾಯಿಗಳಲ್ಲಿ ಇನ್ಸ್ಯುಲಿನ್‍ಸಾರಕ ರೋಗವನ್ನು ಗುಣಪಡಿಸಿದ ವಿಷಯವನ್ನು ಇವರು ರುಜುವಾತುಪಡಿಸಿದರು. ಇದೇ ರೀತಿ ಮುನುಷ್ಯರಲ್ಲಿಯೂ ಉಂಟಾಗುವ ಮಧುಮೇಹ ಇನ್ಸ್ಯುಲಿನ್ ಸಾರಕದಿಂದ ಗುಣವಾಗುತ್ತದೆಂದು ತೀರ್ಮಾನಿಸಿದರು. ಹೀಗೆ ಮೇದೋಜೀರಕ ಗ್ರಂಥಿಯಿಂದ ಇನ್ಸ್ಯುಲಿನ್ನನ್ನು ಬೇರ್ಪಡಿಸಿದ ಮೊದಲಿಗರೆಂದರೆ ಬ್ಯಾಂಟಿಂಗ್ ಮತ್ತು ಬೆಸ್ಟ್. 

	ಬೆಸ್ಟ್ ಟೊರೊಂಟೋ ವಿಶ್ವವಿದ್ಯಾಲಯದಲ್ಲಿ ದೇಹಕ್ರಿಯಾವಿಜ್ಞಾನಿಯಾಗಿ ನೇಮಕ ಹೊಂದಿದ. ಬ್ಯಾಂಟಿಂಗ್ ಮತ್ತು ಬೆಸ್ಟ್ ಇವರ ಜ್ಞಾಪಕಾರ್ಥವಾಗಿ ಆ ವಿಶ್ವವಿದ್ಯಾಲಯದಲ್ಲಿ 1923ರಲ್ಲಿ ಒಂದು ವೈದ್ಯ ಪ್ರಯೋಗ ಶಾಖೆಯನ್ನು ತೆರೆಯಲಾಯಿತು. ಬ್ಯಾಂಟಿಂಗನ ನಿಧನಾನಂತರ, 1941ರಲ್ಲಿ ಬೆಸ್ಟ್‍ನನ್ನು ಈ ಶಾಖೆಯ ನಿರ್ದೇಶಕನನ್ನಾಗಿ ನೇಮಿಸಲಾಯಿತು. ಬ್ಯಾಂಟಿಂಗ್ ಮತ್ತು ಮೆಕ್‍ಲಿಯೋಡ್ ಅವರಿಗೆ 1923ರಲ್ಲಿ ನೊಬೆಲ್ ಪಾರಿತೋಷಿಕ ಪ್ರದಾನಿಸಿದಾಗ ಬೆಸ್ಟ್‍ನನ್ನು ಈ ಯಾದಿಗೆ ಸೇರಿಸದೆ ಮೆಕ್‍ಲಿಯೋಡ್‍ನನ್ನು ಸೇರಿಸಿದ್ದು ಬ್ಯಾಂಟಿಂಗನಿಗೆ ಕೋಪ ತಂದಿತ್ತು. ಮಿತ್ರನ ಒತ್ತಾಯಕ್ಕಾಗಿ ತನ್ನ ಪಾಲಿನ ಬಹುಮಾನ ಧನ ಸ್ವೀಕರಿಸಿದ ಬ್ಯಾಂಟಿಂಗ್ ಅದರ ಅರ್ಧಾಂಶವನ್ನು ಬೆಸ್ಟ್‍ನಿಗೆ ದಾನಮಾಡಿದ.                 		
 (ಎಸ್.ಕೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ